ಬಿ.ಎಂ.ಶ್ರೀ. ಸಂಸ್ಥೆಯ ಸಾಧನೆ

ಈಗಾಗಲೇ ಈ ಸಂಸ್ಥೆಯು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುತ್ತದೆ. ಕರ್ನಾಟಕದಲ್ಲಿ ಸಂಶೋಧನೆ ಮತ್ತು ಪಾಂಡಿತ್ಯ ಸಂವರ್ಧನೆಗಳಿಗೆ ಮೀಸಲಾದ ಪ್ರತಿಷ್ಠಿತ ಸಂಶೋಧನಾ ಕೇಂದ್ರವಾಗಿದೆ. ಈವರೆಗೆ ಸುಮಾರು 185 ಪ್ರಕಟಣೆಗಳನ್ನು ಹೊರತಂದಿದೆ. ಸಂಶೋಧನ ಕಾರ್ಯಕ್ಕೆ ಅನುಕೂಲವಾಗುವಂತೆ ಹದಿನೈದು ಸಾವಿರಕ್ಕೂ ಅಧಿಕ ಅಮೂಲ್ಯ ಗ್ರಂಥಗಳ ಆಕರ ಗ್ರಂಥಾಲಯವನ್ನೂ ಸುಮಾರು ಒಂದು ಸಾವಿರಕ್ಕೂ ಅಧಿಕ ಪ್ರಾಚೀನ ಓಲೆಗರಿ ಗ್ರಂಥಗಳ ಹಸ್ತಪ್ರತಿ ಭಂಡಾರವನ್ನೂ ಹೊಂದಿರುವ ಪ್ರತಿಷ್ಠಾನ, ಸದಸ್ಯರು, ಉದಾರ ದಾನಿಗಳು ಮತ್ತು ಅಭಿಮಾನಿಗಳಿಂದಲೇ ಬೆಳೆಯುತ್ತಿದೆ.

ಎಂ.ವಿ.ಸೀ. ಸ್ನಾತಕೋತ್ತರ ಸಂಶೋಧನ ಕೇಂದ್ರ

ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದಿರುವ ಸ್ನಾತಕೋತ್ತರ ಸಂಶೋಧನ ಕೇಂದ್ರವಾಗಿರುವ ಪ್ರತಿಷ್ಠಾನದಲ್ಲಿ ಗಣ್ಯ ವಿದ್ವಾಂಸರ ಮಾರ್ಗದರ್ಶನದಲ್ಲಿ 10 ಜನ ಪಿ.ಎಚ್ಡಿ. ಪವಿ ಮತ್ತು 22 ವಿದ್ಯಾಗಳು ಎಂ.ಫಿಲ್. ಪದವಿ ಪಡೆದಿರುತ್ತಾರೆ. ನುರಿತ ಮಾರ್ಗದರ್ಶಕರ ಸಹಕಾರದಿಂದ ಈ ಅಧ್ಯಯನ ಕೇಂದ್ರವನ್ನು ನಡೆಸಲಾಗುತ್ತಿದೆ.

ರಾಷ್ಟ್ರೀಯ ಹಸ್ತಪ್ರತಿ ಮಿಷನ್ನ ಮಾನ್ಯತೆಯ ಕೇಂದ್ರ

ರಾಷ್ಟ್ರೀಯ ಹಸ್ತಪ್ರತಿ ಮಿಷನ್ನಿಂದ ಮಾನ್ಯತೆ ಪಡೆದಿರುವ ಪ್ರತಿಷ್ಠಾನ ರಾಷ್ಟ್ರದ ಪ್ರತಿಷ್ಠಿತ ಹಸ್ತಪ್ರತಿ ಅಧ್ಯಯನ ಕೇಂದ್ರವಾಗಿದ್ದು ಅಮೂಲ್ಯ ಓಲೆಗರಿ ಗ್ರಂಥಗಳು, ಕಾಗದ ಪತ್ರಗಳು, ನಮ್ಮ ತಲೆಮಾರಿನ ಸಾಹಿತಿ-ಗಣ್ಯರ ಪತ್ರಗಳು ಮತ್ತು ಹಸ್ತಪ್ರತಿಗಳನ್ನು ಸಂರಕ್ಷಿಸುತ್ತ ನಾಡಿನ ಆಸ್ತಿಯನ್ನು ಉಳಿಸಲು ಶ್ರಮಿಸುತ್ತಿರುವ ಸೇವಾಸಂಸ್ಥೆಯಾಗಿದೆ.

ಬಿ.ಎಂ.ಶ್ರೀ. ಕಲಾಭವನ

ಬೆಂಗಳೂರಿನಲ್ಲಿ ಬಿ.ಎಂ.ಶ್ರೀ. ಸ್ಮಾರಕವನ್ನು, ಸಂಸ್ಥಾಪಕ ಸೀತಾರಾಮಯ್ಯನವರ ಪರಿಶ್ರಮದಿಂದ ಪಡೆಯಲಾಗಿದ್ದ ನಿವೇಶನದಲ್ಲಿ 2000 ರಿಂದ ಆರಂಭಿಸಿದೆ. 3 ಮಹಡಿಗಳ ಭವ್ಯ ಬಿ.ಎಂ.ಶ್ರೀ. ಕಲಾ ಭವನವನ್ನು ಸಂಸದರ ನಿಧಿ ಮತ್ತು ದಾನಿಗಳ ನೆರವಿನಿಂದ ಕಟ್ಟಲಾಗಿದೆ. "ಎಂ.ವಿ.ಸೀ. ಸಭಾಂಗಣ", ಗ್ರಂಥಾಲಯ, ವಸ್ತು-ಹಸ್ತಪ್ರತಿ ಸಂಗ್ರಹಾಲಯ, ಉಪನ್ಯಾಸ ಕೊಠಡಿಗಳು ನಿರ್ಮಾಣವಾಗಿದ್ದು ಪ್ರತಿಷ್ಠಾನದ ರಜತೋತ್ಸವದ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಂದ ಲೋಕಾರ್ಪಣೆಯಾಗಿದೆ.